ABC

Friday, 29 March 2019

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ದೇವೇಗೌಡರು ಮತ್ತು ಸಿದ್ಧರಾಮಯ್ಯ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ತೀರ್ಮಾನವಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕಿಗೂ ಸಿದ್ದರಾಮಯ್ಯ ಮತ್ತು ದೇವೇಗೌಡರು ಜಂಟಿ ಚುನಾವಣಾ ಪ್ರಚಾರ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಏ.1ರಂದು ಮಂಡ್ಯ ಲೋಕಸಭಾ ಅಭ್ಯರ್ಥಿ ಪರ ಚುನಾವಣಾ ಪ್ರಚಾರವನ್ನು ಕಸಬಾ, ಕಿಕ್ಕೇರಿ, ಸಂತೇಬಾಚಹಳ್ಳಿ ಹೋಬಳಿಗಳಲ್ಲಿ ಮಾಡಲಿದ್ದಾರೆ ಹಾಗಾಗಿ ಅಂದು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಮನವಿ ಮಾಡಿದರು.
ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿ ಮಾಡಿರೋದು ಹುಡುಗಾಟ ಆಡಲಿಕ್ಕಲ್ಲ. ಜಿಲ್ಲೆಯ ಅಭಿವೃದ್ದಿಯ ಹಿತದೃಷ್ಠಿಯಿಂದ ಅವರನ್ನು ಜಿಲ್ಲೆಯ ಶಾಸಕರು ಹಾಗೂ ಮುಖಂಡರು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.

ಶ್ರೀರಂಗಪಟ್ಟಣದಿಂದ ಕೆ.ಆರ್.ಪೇಟೆ, ಕಿಕ್ಕೇರಿ, ಚ.ರಾ.ಪಟ್ಟಣ ಮಾರ್ಗವಾಗಿ ಅರಸೀಕೆರೆ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿದರು.ಶಾಸಕ ಕೆ.ಸಿ.ನಾರಾಯಣಗೌಡ ಮಾತನಾಡಿ, ತಾಲೂಕಿನಲ್ಲಿ ನನಗೆ ಯಾವುದೇ ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡದಿದ್ದರೂ ಪರವಾಗಿಲ್ಲ.

ಇದಕ್ಕೇ ಯಾವುದೇ ಬೇಜಾರು ಮಾಡ್ಕೊಳಲ್ಲ. ತಾಲೂಕಿನ ಅಭಿವೃದ್ಧಿಗಾಗಿ ಬಂದಿರುವ ನನಗೆ ನನ್ನ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಶಾಸಕ ನಾರಾಯಣಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ಹೇಮಂತ್‍ಕುಮಾರ್, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ ಮಂಜು, ಜಿಪಂ ಮಾಜಿ ಅಧ್ಯಕ್ಷೆ ಡಾ.ಜೆ.ಪ್ರೇಮಕುಮಾರಿ, ಮಾಜಿ ಉಪಾಧ್ಯಕ್ಷ ಡಾ.ಕೆ.ಎಸ್.ಪ್ರಭಾಕರ್, ಮುಖಂಡರಾದ ಕೆ.ಶ್ರೀನಿವಾಸ್, ಕೆ.ಎಸ್.ರಾಮೇಗೌಡ, ಕೆ.ಟಿ.ಗಂಗಾಧರ್, ನೂರುಲ್ಲಾಖಾನ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಮತ್ತಿತರರು ಉಪಸ್ಥಿತರಿದ್ದರು.

ಕಳೆದ 5 ವರ್ಷದಲ್ಲಿ ಮೋದಿ ಭಾಷಣ ಬಿಟ್ಟರೆ ಮತ್ತೇನೂ ಮಾಡಿಲ್ಲ : ಡಿ.ಕೆ.ಸುರೇಶ್.

ಕನಕಪುರ:  ಪ್ರಧಾನಮಂತ್ರಿ ನರೇಂದ್ರಮೋದಿ ಕಳೆದ ಐದು ವರ್ಷಗಳಲ್ಲಿ ಕೇವಲ ಭಾಷಣಗಳಿಂದಲೇ ದೇಶದ ಜನರನ್ನು ಮಂತ್ರಮುಗ್ಧಗೊಳಿಸಿದ್ದು, ಇದರಿಂದ ಬಡಜನರಿಗೆ ಹಾಗೂ ರೈತರಿಗೆ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಬೆಂಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.ಕೀರಣಗೆರೆ ಜಗದೀಶ್‍ರವರ ತೋಟದಲ್ಲಿ ನಡೆದ ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಯ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ರೈತರ ಜೀವನ ಸಂಕಷ್ಟಕ್ಕೆ ಹಿಡಾಗಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಪ್ರಧಾನಮಂತ್ರಿ ನೀಡಿದ್ದ ಒಂದು ಭರವಸೆಯನ್ನು ಹಿಡೆರಿಸಿಲ್ಲ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಕ್ಷೇತ್ರದ ಮತದಾರರಿಗೆ ಪರಿಚಯವೇ ಇಲ್ಲದವರನ್ನು ನಿಲ್ಲಿಸಿದ್ದು, ಮೋದಿಯವರನ್ನು ತೋರಿಸಿ, ಮತ ಕೇಳಿತಿದ್ದು, ಆದರೆ, ನಾವು ಐದು ವರ್ಷದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಸಿದಂತಹ ಅಭಿವೃದ್ದಿ ಕಾರ್ಯಗಳ ಮೇಲೆ ಮತ ಕೇಳುತ್ತಿದ್ದೇವೆ ಎಂದರು.ವಿಶೇಷವಾಗಿ ಈ ಚುನಾವಣೆಯು ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷದ ಮೈತ್ರಿಯಿಂದ ಬಲಬಂದಿದ್ದು, ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮಲ್ಲಿರುವ ವೈಮನಸನ್ನು ಮರೆತು ತಮ್ಮ ಗ್ರಾಮಗಳಲ್ಲಿ ಪ್ರತಿಯೊಬ್ಬ ಮತದಾರನಿಗೂ ನಮ್ಮ ಸಾಧನೆಯನ್ನು ತಿಳಿಸಿ ಅತಿ ಹೆಚ್ಚು ಅಂತರದಿಂದ ಗೆಲ್ಲಿಸಲು ಶ್ರಮವಹಿಸಬೇಕೆಂದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಣ್ಣಿನ ಮಕ್ಕಳಾದರೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್‍ರವರು ನೀರಿನ ಮಕ್ಕಳು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಿರಣಗೆರೆ ಜಗದೀಶ್ ಹೇಳಿದರು.ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಯ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿ, ಇಂದು ರಾಜ್ಯದಲ್ಲಿ ರಾಜ್ಯಾತೀತ ಪಕ್ಷಗಳು ಒಂದುಗೂಡಿ ಸರ್ಕಾರ ರಚಿಸಿದ್ದು, ರೈತಪರ ಹಾಗೂ ಬಡವರಪರ ಇರುವ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಲು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್‍ರವರು ಸಂಪೂರ್ಣ ಸಹಕಾರವನ್ನು ನೀಡಿದ್ದು, ಜಿಲ್ಲೆಯ ಅಭಿವೃದ್ದಿಗೆ ಇಬ್ಬರೂ ಮಹಾನ್ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ.
ರಾಜ್ಯದ ಇತಿಹಾಸದಲ್ಲೇ 50 ಸಾವಿರ ರೂಪಾಯಿಗಳು ಸಾಲಮನ್ನ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ರಾಮನಗರ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಜಿಪಂ ಅಧ್ಯಕ್ಷ ನಾಗರಾಜ್, ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಭುಜಂಗಯ್ಯ, ರಾಮಕೃಷ್ಣ, ಉಮೇಶ್, ಮಲ್ಲಪ್ಪ, ರಾಮು, ಲಕ್ಷ್ಮಣ, ಸೋಮಶೇಖರ್, ಶಾರದರಾಜು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜೆ.ಸಿ.ಬಿ ಅಶೋಕ್, ಕೀರಣಗೆರೆ ಜಗದೀಶ್, ಜಿ.ಪಂ.ಸದಸ್ಯ ಹೆಚ್.ಕೆ.ನಾಗರಾಜು, ಮುಖಂಡರಾದ ಸರ್ಬ್ದರ್ ಹುಸೇನ್, ಮೊಹಮ್ಮೊದ್ ಯಜಜ್ಸ್, ಹೊನ್ನಾಲಗನದೊಡ್ಡಿ ಹರೀಶ್, ಗೀತಾ ಈಶ್ವರ್, ಶ್ರೀಕಂಠಯ್ಯ, ಮೋಹನ್ ಆಳ್ವ, ಗುರುಪ್ರಸಾದ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Thursday, 28 March 2019

ಕಣದಿಂದ ಹಿಂದೆ ಸರಿದ ಮುದ್ದಹನುಮೇಗೌಡ: ದೇವೇಗೌಡರ ಹಾದಿ ಸುಗಮ.

ತುಮಕೂರು: ಕಾಂಗ್ರೆಸ್‍ನಲ್ಲಿ ಬಂಡಾಯವೆದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇಗೌಡ ವಿರುದ್ಧ ಸ್ಪರ್ಧಿಸಿಯೇ ಸಿದ್ಧ ಎಂದು ತೊಡೆತಟ್ಟಿದ್ದ ಸಂಸದ ಮುದ್ದಹನುಮೇಗೌಡ, ಅಖಾಡದಿಂದ ಹಿಂದಕ್ಕೆ ಸರಿದಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದ ಮುದ್ದಹನುಮೇಗೌಡ ಅವರ ಮನವೊಲಿಸುವುದರಲ್ಲಿ ಕಾಂಗ್ರೆಸ್ ನಾಯಕರು ಕೊನೆಗೂ ಯಶಸ್ವಿಯಾಗಿದ್ದಾರೆ. ಇದರಿಂದ ಮೈತ್ರಿಪಕ್ಷಗಳು ನೆಮ್ಮದಿಯ ಉಸಿರುಬಿಡುವಂತಾಗಿದೆ.ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿಗಳಾದ ಮುದ್ದಹನುಮೇಗೌಡ ಮತ್ತು ಕೆ.ಎನ್. ರಾಜಣ್ಣ ಅವರಿಬ್ಬರೊಂದಿಗೂ ಸಿದ್ದರಾಮಯ್ಯ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆಗೂಡಿ ಸತತ ಸಭೆ ನಡೆಸಿದ್ದಾರೆ.

ಸಂಜಯನಗರದಲ್ಲಿರುವ ಮುದ್ದಹನುಮೇಗೌಡ ಮನೆಗೆ ಶುಕ್ರವಾರ ಬೆಳಗ್ಗೆ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ದಿನೇಶ್ ಗುಂಡೂ ರಾವ್ ಆಗಮಿಸಿ ಮಾತುಕತೆ ನಡೆಸಿದರು.ಸಂಸದ ಮುದ್ದೇಹನುಮಗೌಡ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ನಾಮಪತ್ರವನ್ನು ಹಿಂಪಡೆಯುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹಾಕುತ್ತಿದ್ದಾರೆ. ಈಗ ಈ ಪ್ರಯತ್ನದಲ್ಲಿ ಯಶಸ್ಸು ಕೂಡ ಸಾಧಿಸಿದ್ದಾರೆ.

ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕಣಕ್ಕಿಳಿದಿದ್ದಾರೆ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಮುದ್ದಹನುಮೇಗೌಡರು ಪಟ್ಟು ಹಿಡಿದಿದ್ದರು.

ನಾಮಪತ್ರ ಹಿಂಪಡೆಯುವ ಭರವಸೆ :
ತುಮಕೂರು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎಸ್.ಪಿ.ಮುದ್ದಹನುಮೇಗೌಡರು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರೊಂದಿಗೆ ಮಾತುಕತೆ ನಡೆಸಿದ್ದ ಬಳಿಕ ನಾಮಪತ್ರ ಹಿಂಪಡೆಯುವ ಭರವಸೆ ವ್ಯಕ್ತಪಡಿಸಿದರು.ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಹೈಕಮಾಂಡ್ ನಿರ್ಧಾರದಿಂದಾಗಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ, ಮೈತ್ರಿ ಧರ್ಮಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಮುಖಂಡರು ನಮ್ಮ ಮನವೊಲಿಸಿದ್ದಾರೆ.

ತಮ್ಮ ನಿವಾಸಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಂದೆ ಉತ್ತಮ ಅವಕಾಶ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ವ್ಯತಿರಿಕ್ತ ನಿರ್ಧಾರ ತೆಗೆದುಕೊಳ್ಳದಂತೆ ಅವರು ತಿಳಿಸಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಮಾತನಾಡಿದ ದಿನೇಶ್‍ಗುಂಡೂರಾವ್, ಅವರು ಪಕ್ಷದ ನಿಷ್ಟಾವಂತರು. ಎಲ್ಲಾ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಆದರೆ, ಮೈತ್ರಿ ಧರ್ಮವನ್ನು ಪಾಲಿಸಬೇಕಿರುವುದರಿಂದ ಪಕ್ಷದಿಂದ ಮನವಿ ಮಾಡಿದ್ದೇವೆ ಎಂದರು. ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಮುಂದೆ ಉತ್ತಮ ಅವಕಾಶವನ್ನೂ ನೀಡುವ ಭರವಸೆಯನ್ನೂ ನೀಡಿದ್ದೇವೆ.

ಐಟಿ ದಾಳಿ ನಡೆದದ್ದು ಯಾಕೆ..? ಅಸಲಿ ಕಾರಣ ಬಿಚ್ಚಿಟ್ಟ ದೇವೇಗೌಡರು..!

ನಿನ್ನೆ ರಾಜ್ಯದ 20 ಕಡೆ ಜೆಡಿಎಸ್ ಮುಖಂಡರ ಆಪ್ತರ ಮೇಲೆ ನಡೆದ ಐಟಿ ದಾಳಿಯ ಹಿಂದಿನ ಸತ್ಯವನ್ನು ಜೆಡಿಎಸ್ ವರಿಷ್ಠರಾದ ದೇವೇಗೌಡರು ಬಿಚ್ಚಿಟ್ಟಿದ್ದಾರೆ. 
ಸರಕಾರ ರಚನೆ ಮಾಡುವುದಕ್ಕೆ ಅಂದು ಅಮಿತ್ ಶಾ ಕೊಟ್ಟ ಆಫರ್ ಅನ್ನು ನಾವು ನಿರಾಕರಿಸಿದ್ದೇವು. ಅಷ್ಟೇ ಅಲ್ಲದೇ ಈ ಹಿಂದೆ ಜೆಡಿಎಸ್ ಜೊತೆಗೆ ಸರಕಾರವನ್ನು ರಚಿಸುವುದಕ್ಕೆ ಬಿಜೆಪಿ ಮುಂದಾಗಿತ್ತು, ಅದು ಸಾಧ್ಯವಾಗದ ಕಾರಣ ಬಿಜೆಪಿಯವರು ದಾಳಿ ನಡೆಸಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ನಾವು ಬಿಜೆಪಿಯ ಈ ತಂತ್ರಕ್ಕೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವ ದಾಳಿಗೂ ನಾವು ಹೆದರಲ್ಲ ನಮ್ಮನ್ನು ಹೆದರಿಸಿ ಎಲೆಕ್ಷನ್ ಗೆಲ್ಲೋಕಾಗಲ್ಲ : ಎಚ್ ಡಿ ಕುಮಾರಸ್ವಾಮಿ.

ಮೈಸೂರು: ನಿಷ್ಪಕ್ಷಪಾತವಾಗಿ ಲೋಕಸಭೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲದೆ ವಾಮಮಾರ್ಗದ ಮೂಲಕ ತನ್ನ ಅಧೀನದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಕಚೇರಿ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭೀತಿಯಿಂದ ವಾಮಮಾರ್ಗ ಅನುಸರಿಸುತ್ತಿದೆ. ಆದಾಯ ತೆರಿಗೆ ಇಲಾಖೆ ಸೇರಿದಂತೆ ಯಾವುದೇ ದಾಳಿ ಮಾಡಿದರೂ ನಾವು ಹೆದರುವುದಿಲ್ಲ. ಯಾವ ಪರಿಣಾಮವೂ ಬೀರುವುದಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲವು ನಾಯಕರ ಮನೆ ಮೇಲೆ ದಾಳಿ ನಡೆದಿರುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಕಚೇರಿ ಮುಂದೆ ಉಭಯ ಪಕ್ಷಗಳು ನಡೆಸುವ ಪ್ರತಿಭಟನೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.


ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗಲಿದೆ. ಜೆಡಿಎಸ್ ಪಕ್ಷವನ್ನು ಹೆದರಿಸುವ ಪ್ರಯತ್ನದ ಮೂಲಕ ಲೋಕಸಭೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಐಟಿ ದಾಳಿ ಮೂಲಕ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ್ದಾರೆ ಎಂದು ಗುಡುಗಿದರು.

ತಾವು ಕಾನೂನು ರೀತಿ ಹೋರಾಟಕ್ಕೆ ತಯಾರಾಗಿದ್ದೇವೆ ಎಂದ ಅವರು ಮುಖ್ಯಮಂತ್ರಿ ಮನೆ ಬಾಗಿಲು 24 ಗಂಟೆಯೂ ಬಾಗಿಲು ತೆರೆದಿರುತ್ತದೆ, ದಾಳಿ ಮಾಡಲಿ ಎಂದರು. ನ್ಯಾಯಾಲಯದ ಆದೇಶವಿಲ್ಲದೆ ಮುಖ್ಯಮಂತ್ರಿ ಮನೆ ಮೇಲೆ ದಾಳಿ ಮಾಡಲು ಬರುವುದಿಲ್ಲ ಎಂಬುದು ತಮಗೂ ಗೊತ್ತಿದೆ ಎಂದು ತಿಳಿಸಿದರು.ಆದಾಯ ತೆರಿಗೆ ಇಲಾಖೆ ನಿರ್ದೇಶಕರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ. ಅವರಿಗೆ ಸಂವಿಧಾನಿಕ ಹುದ್ದೆ ನೀಡುವ ಭರವಸೆ ನೀಡಲಾಗಿದೆ ಎಂದು ಆರೋಪಿಸಿದರು. ಆದಾಯ ತೆರಿಗೆ ಇಲಾಖೆ ನಿರ್ದೇಶಕರನ್ನು ಬದಲಾವಣೆ ಮಾಡಿ ನಿಷ್ಪಕ್ಷಪಾತ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಹಾಸನ, ಮಂಡ್ಯ, ಕನಕಪುರ, ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ ಮಾತ್ರ ಏಕೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿದೆ. ಬೇರೆಲ್ಲೂ ಇಲ್ಲವೇ ಎಂದು ಪ್ರಶ್ನಿಸಿದ ಅವರು ಜೆಡಿಎಸ್‍ಗೆ ಭಯ ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ.
ಐಟಿ ದಾಳಿ ಸಂದರ್ಭದಲ್ಲಿ ರಾಜ್ಯ ಪೊಲೀಸರ ಸಹಕಾರ ಪಡೆಯಲಾಗುತ್ತಿತ್ತು. ಆದರೆ, ಸಿಆರ್‍ಪಿಎಫ್ ಭದ್ರತೆಯಲ್ಲಿ ದಾಳಿ ನಡೆಸಲಾಗಿದೆ. ಕೇಂದ್ರ ಸರ್ಕಾರ ತನ್ನ ಅಧೀನದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ನೀಚನತನದ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ರಾಜ್ಯದ ಒಬ್ಬ ವ್ಯಕ್ತಿ ಮಾಹಿತಿ ಸಂಗ್ರಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸುತ್ತಾರೆ. ಆನಂತರ ದಾಳಿ ನಡೆಯುತ್ತಿದೆ ಎಂದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರವಿಲ್ಲವೆ? ರಕ್ಷಣೆಗೆ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದ ಅವರು, ವಿಧಾನಸೌಧದ ಬಳಿ ದೊರೆತ ಹಣ ಯಾರದ್ದೆಂಬುದು ಎಂಬ ಮಾಹಿತಿಯನ್ನು ಇದುವರೆಗೂ ಏಕೆ ಕೊಟ್ಟಿಲ್ಲ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ದೊರೆತಿರಲಿಲ್ಲವೆ? ಪ್ರಾಮಾಣಿಕತೆ ಬಗ್ಗೆ ನಮಗೆ ಬುದ್ಧಿ ಹೇಳುವ ಪ್ರಯತ್ನ ಮಾಡಬೇಕಿಲ್ಲ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಐಟಿ ದಾಳಿ ಮೂಲಕ ಮಂಡ್ಯದ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂಬುದು ಕನಸಿನ ಮಾತು. ಚುನಾವಣೆ ಮೇಲೆ ಈ ದಾಳಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Thursday, 21 March 2019

ಧಾರವಾಡ ಕಟ್ಟಡ ಕುಸಿತ ದುರಂತ ಸ್ಥಳಕ್ಕೆ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭೇಟಿ.

ಧಾರವಾಡ ಕಟ್ಟಡ ಕುಸಿತ ದುರಂತ ಸ್ಥಳಕ್ಕೆ
ಮುಖ್ಯಮಂತ್ರಿಗಳ ಭೇಟಿ.
-----
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಧಾರವಾಡದ ಕುಮಾರೇಶ್ವರ ನಗರದಲ್ಲಿ ಕುಸಿದ ವಾಣಿಜ್ಯ ಕಟ್ಟಡ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆ ನಡೆಸಲೂ ಸಹ ಸರ್ಕಾರ ಸಿದ್ಧ ಎಂದು  ತಿಳಿಸಿದರು.

ಮುಖ್ಯಮಂತ್ರಿಗಳು, ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರ ಬಂಧುಗಳೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು. ಜಿಲ್ಲಾ ಆಸ್ಪತ್ರೆ ಮತ್ತು ಸತ್ತೂರಿನ ಎಸ್.ಡಿ‌.ಎಂ.ಆಸ್ಪತ್ರೆಗೆ ತೆರಳಿಗೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ. ದುರಂತ ಸಂಭವಿಸಿದ ತಕ್ಷಣ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಅಧಿಕಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ ಎಂದು ತಿಳಿಸಿದರು..

ಪೌರಾಡಳಿತ ಸಚಿವರಾದ ಸಿ.ಎಸ್. ಶಿವಳ್ಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ್ಅಬ್ಬಯ್ಯ , ಪೊಲೀಸ್ ಮಹಾ ನಿರ್ದೇಶಕ ಎಂ.ಎನ್. ರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಜಿಲ್ಲಾಧಿಕಾರಿ ದೀಪಾ ಚೋಳನ್, ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ಡಿಐಜಿ ರವಿಕಾಂತೇಗೌಡ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಉಪಸ್ಥಿತರಿದ್ದರು.

Thursday, 14 March 2019

ನಿಖಿಲ್ ಸ್ಪರ್ಧೆಯಿಂದ ಲಕ್ಷ್ಮಿ ಅಶ್ವಿನ್ ಗೌಡಗೆ ಅನ್ಯಾಯವಾಗಿಲ್ಲ: ಎಚ್ ಡಿ ಕುಮಾರಸ್ವಾಮಿ.

ಮಂಡ್ಯ: ನಿಖಿಲ್ ಸ್ಪರ್ಧೆಯಿಂದ ಲಕ್ಷ್ಮಿ ಅಶ್ವಿನ್ ಗೌಡರಿಗೆ ಅನ್ಯಾಯವಾಗಿಲ್ಲ. ಐಆರ್‍ಎಸ್‍ನಿಂದ ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅವರು ತಮ್ಮ ವೃತ್ತಿಗೆ ಮರಳುತ್ತಿದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿ ನಿಖಿಲ್‍ಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿರೋದು ನನ್ನ ಗಮನಕ್ಕೆ ಬಂದಿದೆ. ಆದ್ರೆ ಹೆಚ್ಚಿನ ಜನರಿಗೆ ಹಿಂದಿನ ವಿಷಯ ಗೊತ್ತಿಲ್ಲ. ಮಳವಳ್ಳಿಯ ಜೆಡಿಎಸ್ ಅಧ್ಯಕ್ಷ ಕೆಂಚಪ್ಪನವರ ಪುತ್ರಿ, ನಾಗಮಂಗಲದ ಸೊಸೆ ಲಕ್ಷ್ಮಿ ಅಶ್ವಿನ್ ಗೌಡ ವಿಧಾನಸಭಾ ಚುನಾವಣಾ ಅಭ್ಯರ್ಥಿ ಆಗಬೇಕೆಂದು ಭೇಟಿ ಮಾಡಿದ್ದರು. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮೊದಲ ಭೇಟಿಯಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲಿಂದಲೇ ನಮ್ಮ ಪರಿಚಯವಾಗಿತ್ತು ಎಂದರು.

ದೇವೇಗೌಡರ ಕುಟುಂಬ ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾವು ದೇವರನ್ನು ನಂಬಿಕೊಂಡು ಬದುಕುವ ಜೀವಿಗಳು. ಲಕ್ಷ್ಮಿ ಅವರ ಪತಿ ಐಆರ್‍ಎಸ್ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವಂತಹ ಕೆಲ ಸುದ್ದಿಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅಶ್ವಿನ್ ಗೌಡ ಮತ್ತೆ ತಮ್ಮ ಉದ್ಯೋಗಕ್ಕೆ ಹಾಜರಾಗಲು ಇಚ್ಛಿಸಿದ್ದಾರೆ. ಕಳೆದ ವಾರ ದೆಹಲಿಗೆ ಹೋದಾಗ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಕೆಲಸಕ್ಕೆ ಸೇರಬೇಕೆಂದು ಕೇಳುತ್ತಿದ್ದು, ಅವಕಾಶ ನೀಡಿ ಎಂದು ಕೇಳಿಕೊಂಡಿದ್ದೇನೆ. ಆರು ತಿಂಗಳ ಹಿಂದೆ ನಾಲ್ಕು ವರ್ಷದ ಅವಧಿಗೆ ಲಕ್ಷ್ಮಿ ಅಶ್ವಿನ್ ಗೌಡರನ್ನು ನೇಮಿಸಲು ಪಕ್ಷ ಮುಂದಾಗಿತ್ತು. ರಾಜಕೀಯ ಅನುಭವದ ಆಗಬೇಕಾದ್ರೆ ಎಂಎಲ್‍ಸಿ ಗೆ ಅರ್ಜಿ ಸಲ್ಲಿಸಲು ತಂಗಿಗೆ ಹೇಳಿದ್ದಂತೆ ಸಲಹೆ ನೀಡಿದ್ದೆ. ನಮ್ಮ ಕುಟುಂಬದಿಂದ ಯಾವ ಮಹಿಳೆಗೂ ಅನ್ಯಾಯವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.ಕಳೆದ ಎರಡೂವರೆ ತಿಂಗಳಿನಿಂದ ಮಾಧ್ಯಮಗಳಲ್ಲಿ ಸುದ್ದಿಯನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಮಂಡ್ಯದಲ್ಲಿಯೇ ಈ ರೀತಿಯ ವಾತಾವರಣ ನಿರ್ಮಾಣ ಆಗುತ್ತೆ ಅಂದುಕೊಂಡಿರಲಿಲ್ಲ. ನಿಖಿಲ್ ಕುಮಾರಸ್ವಾಮಿಯನ್ನು ಉಪಚುನಾವಣೆ ನಿಲ್ಲಿಸಬೇಕೆಂದು ರವೀಂದ್ರ ಶ್ರೀಕಂಠಯ್ಯ ಎಂದು ಹೇಳಿದಾಗ ನನಗೆ ಒಂದು ಕ್ಷಣ ನಡುಕ ಉಂಟಾಯಿತು. ಇಂದು ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಮನಸ್ಸು ನನಗಿರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಚುನಾವಣೆಗೆ ನಿಂತಿದ್ದಾನೆ. ಮಾಧ್ಯಮಗಳಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಮಂಡ್ಯ ಕ್ಷೇತ್ರದ ಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...