ಕಾಂಗ್ರೆಸ್ ಪಾಳಯ ಯಾವುದೇ ಕಾರಣಕ್ಕೂ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಎಂದು ಪಕ್ಷದ ಧುರೀಣರ ಮೇಲೆ ಒತ್ತಡ ಹೇರುತ್ತಿದೆ.ಈ ಸಂಬಂಧವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್‍ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರ ಜೊತೆ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ.ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನಾಳೆ ದೇವೇಗೌಡರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಒಂದು ವೇಳೆ ನಾಳಿನ ಸಭೆಯಲ್ಲಿ ಕ್ಷೇತ್ರ ಹಂಚಿಕೆ ಸಂಬಂಧ ಚರ್ಚೆ ಸುಖಾಂತ್ಯವಾದರೆ ಅದಕ್ಕೆ ಹೈಕಮಾಂಡ್‍ನಿಂದ ಒಪ್ಪಿಗೆ ಪಡೆದು ಒಂದೆರಡು ದಿನಗಳಲ್ಲಿ ಕ್ಷೇತ್ರ ಹಂಚಿಕೆಗಳ ಪಟ್ಟಿ ಹೊರ ಬೀಳಲಿದೆ.ಇಲ್ಲವಾದರೆ ಚರ್ಚೆಯ ಮುಂದುವರೆದ ಭಾಗ ದೆಹಲಿಗೆ ಸ್ಥಳಾಂತರಗೊಳ್ಳಲಿದೆ. ರಾಹುಲ್‍ಗಾಂಧಿಯವರ ನೇತೃತ್ವದಲ್ಲೇ ಸಂಧಾನ ಮಾತುಕತೆಗಳು ಮುಂದುವರೆಯಲಿವೆ.
ಇಂದು ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ನಾಳೆ ದೇವೇಗೌಡರ ಜೊತೆ ಮಾತುಕತೆ ನಡೆಸುವುದನ್ನು ಖಚಿತಪಡಿಸಿದ್ದಾರೆ.ಸೀಟು ಹಂಚಿಕೆಗೆ ವಿಷಯವಾಗಿ ಯಾವುದೇ ಗೊಂದಲಗಳಿಲ್ಲ. ಕೆಲವು ಕ್ಷೇತ್ರಗಳ ಹಂಚಿಕೆ ಸಂಬಂಧಪಟ್ಟಂತೆ ಚರ್ಚೆಯ ಅಗತ್ಯವಿದೆ. ಹೀಗಾಗಿ ದೇವೇಗೌಡರ ಜೊತೆ ನಾನು ಮತ್ತು ದಿನೇಶ್‍ಗುಂಡೂರಾವ್ ಮಾತನಾಡುತ್ತೇವೆ. ಒಂದು ವೇಳೆ ಬಗೆಹರಿಯದಿದ್ದರೆ ರಾಹುಲ್‍ಗಾಂಧಿಯವರ ನೇತೃತ್ವದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸದಾ ಸಿದ್ಧವಿದೆ. ಪಕ್ಷ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷರು ಸಭೆಗಳ ಮೇಲೆ ಸಭೆಗಳನ್ನು ಮಾಡಿ ಕೆಳಹಂತದಿಂದಲೂ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಲೋಕಸಭಾ ಚುನಾವಣೆಗೂ ಒಟ್ಟಾಗಿ ಹೋಗುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

No comments:
Post a Comment