ABC

Monday, 11 February 2019

ಮೊದಲ ಮೈತ್ರಿ ಸರಕಾರ ಆರಂಭಿಸಿದ್ದು ವಾಜಪೇಯಿ: ಮೋದಿಗೆ ದೇವೇಗೌಡ ತಿರುಗೇಟು.

ಮೈತ್ರಿ ಸರಕಾರದ ಬಗ್ಗೆ ಅಣಕದ ಮಾತನಾಡುತ್ತಿರುವ ಪ್ರಧಾನಿ ಮೋದಿಗೆ ತಿರುಗೇಟು ನೀಡಿರುವ ದೇವೇಗೌಡ ಹಲವು ಸುಧಾರಣಾ ಕಾರ್ಯಕ್ರಮಗಳು ನಡೆದಿರುವುದು ಮೈತ್ರಿ ಸರಕಾರಗಳ ಅವಧಿಯಲ್ಲೇ ಎಂದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಪದೇ ಪದೇ ಸಮ್ಮಿಶ್ರ ಸರಕಾರದ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಹಾಗೂ ಸಮ್ಮಿಶ್ರ ಸರಕಾರ ಜನರ ಆಶೋತ್ತರಗಳನ್ನು ಈಡೇರಿಸದು ಎಂಬ ಮಾತುಗಳಿಗೆ ಲೋಕಸಭೆಯಲ್ಲಿ ತಿರುಗೇಟು ಕೊಟ್ಟಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, “ದೇಶದಲ್ಲಿ ಮೊದಲ ಸಮ್ಮಿಶ್ರ ಸರಕಾರ ರಚಿಸಿದ್ದೇ ಅಟಲ್‌ ಬಿಹಾರಿ ವಾಜಪೇಯಿ” ಎಂದಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ದೇವೇಗೌಡ, “ಸಮ್ಮಿಶ್ರ ಸರಕಾರ ತಾನು ನೀಡುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ಪ್ರಧಾನ ಮಂತ್ರಿ ಪದೇ ಪದೇ ಹೇಳುತ್ತಿದ್ದಾರೆ. ವಾಜಪೇಯಿ ನೇತೃತ್ವದಲ್ಲಿ ಮೊದಲ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. ನಾನೂ ಕೂಡಾ 320 ದಿನಗಳ ಕಾಲ ಸಮ್ಮಿಶ್ರ ಸರಕಾರದಲ್ಲಿ ಪ್ರಧಾನ ಮಂತ್ರಿಯಾಗಿದ್ದೆ. ಸಮ್ಮಿಶ್ರ ಸರಕಾರದ ನಾಯಕನಾಗಿದ್ದುಕೊಂಡೇ ನಾನು ಹಲವು ಸುಧಾರಣೆಗಳನ್ನು ತಂದಿದ್ದೇನೆ” ಎಂದಿದ್ದಾರೆ.

“ನಿಮಗೆ ನೆನಪಿರಲಿ ಮನ್‌ಮೋಹನ್‌ ಸಿಂಗ್‌ ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ತಂದವರು. ನಾವು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋದೆವು. ಆರ್‌ಟಿಐ ಕಾಯ್ದೆಯ ಪ್ರಕ್ರಿಯೆ ಶುರುವಾಗಿದ್ದೇ ನಮ್ಮ ಸರಕಾರದ ಕಾಲದಲ್ಲಿ. ಲೋಕಪಾಲ್‌ ಅಡಿಯಲ್ಲಿ ಪ್ರಧಾನ ಮಂತ್ರಿಯೂ ಬರಬೇಕು ಎಂದು ವೈಯಕ್ತಿಕವಾಗಿ ಒತ್ತಾಯಿಸಿದ್ದವನು ನಾನು” ಎಂದು ದೇವೇಗೌಡ ಹೇಳಿದ್ದಾರೆ.

“ಇಂಧನ ಉತ್ಪಾದನೆ ಹಾಗೂ ವಿತರಣೆಯ ವಿಕೇಂದ್ರೀಕರಣ, ದೂರ ಸಂಪರ್ಕ ಕ್ರಾಂತಿ ಹಾಗೂ ಮಹಿಳಾ ಮೀಸಲಾತಿ ಮಸೂದೆ ಇವೆಲ್ಲವೂ ಬಂದಿದ್ದು ಸಮ್ಮಿಶ್ರ ಸರಕಾರದ ಅವಧಿಯಲ್ಲೇ. ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಹಲವು ಸರಕಾರಗಳು ಪ್ರಯತ್ನಿಸಿದವು. ಮಸೂದೆ ರಾಜ್ಯ ಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ, ಇನ್ನೂ ಲೋಕಸಭೆಗಿನ್ನೂ ಬಂದಿಲ್ಲ” ಎಂದರು.

“ನಾವು ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಮತ್ತು ನಮ್ಮ ಪಕ್ಷದ ನಡುವೆ ಹಲವು ಅಭಿಪ್ರಾಯ ಭೇದಗಳಿವೆ. ಆದರೆ, ಈ ಭಿನ್ನತೆಯನ್ನು ನಾವು ಸರಕಾರದೊಳಕ್ಕೆ ಬಿಟ್ಟುಕೊಂಡು ಸರಕಾರ ಬೀಳಲು ಅವಕಾಶ ಕೊಡುವುದಿಲ್ಲ” ಎಂದಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಮುನ್ಸೂಚನೆ ನೀಡಿರುವ ದೇವೇಗೌಡ, “ನಾನು ವಯಸ್ಸಾದವನಿರಬಹುದು. ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸದೆಯೂ ಇರಬಹುದು. ಆದರೆ, ನಾನು ಹೊಸಬರಿಗೆ ಮಾರ್ಗದರ್ಶನ ನೀಡುತ್ತೇನೆ. ಸರಕಾರವನ್ನು ದುರ್ಬಲಗೊಳಿಸಲು ನಾನು ಬಿಡುವುದಿಲ್ಲ” ಎಂದು ಹೇಳಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...