ABC

Monday, 25 February 2019

ವೋಲಾ ಊಬರ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಸೇವೆ: ಬಂಡೆಪ್ಪ ಖಾಶೆಂಪೂರ.

ಬೆಂಗಳೂರು: 2019-20ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಸಂಯುಕ್ತ ಬೇಸಾಯ(ಗುಂಪು ಕೃಷಿ)ದಡಿ ರೈತರಿಗೆ ಅನುಕೂಲ ಕಲ್ಪಿಸಲು ಸಹಕಾರ ಇಲಾಖೆ ರೈತರಿಗೆ ನೆರವು ಒದಗಿಸಲು ಮುಂದಾಗಿದೆ. 
ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಹಾಗೂ ಕೃಷಿ ಗೋದಾಮುಗಳಿಗೆ ಸಾಗಿಸಲು ವೋಲಾ-ಊಬರ್ ಕ್ಯಾರಿ ಮಾದರಿಯಲ್ಲಿ ಟ್ರ್ಯಾಕ್ಟರ್ ಸೇವೆಗಳನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ, ಸಹಕಾರ ವಲಯದಲ್ಲಿ ಕೃಷಿ ಇಲಾಖೆಯ ರೈತ ಉತ್ಪಾದಕರ ಸಂಸ್ಥೆಯ ಮಾದರಿಯಲ್ಲಿ 300 ಎಕರೆ ಕೃಷಿ ಭೂಮಿಯಲ್ಲಿ 100 ರೈತರನ್ನೊಳಗೊಂಡ 500 ಗುಂಪು ಕೃಷಿ  ಸಹಕಾರ ಸಂಘಗಳನ್ನು ಆಯವ್ಯಯದಲ್ಲಿ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಜಿಪಿಆರ್ ಎಸ್ ಅಳವಡಿಸಿರುವ ಟ್ರ್ಯಾಕ್ಟರ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಓಲಾ-ಊಬರ್ ಕ್ಯಾರಿ ಮಾದರಿಯಲ್ಲಿ ಟ್ರ್ಯಾಕ್ಟರ್ ಕೆಲಸ ನಿರ್ವಹಿಸಲಿದೆ. ರೈತರು ಟ್ರ್ಯಾಕ್ಟರ್ ಸೇವೆ ಒದಗಿಸುವ ಸಂಖ್ಯೆಗೆ ಕರೆ ಮಾಡಿ, ಕಡಿಮೆ ಖರ್ಚಿನಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ, ಉಗ್ರಾಣಕ್ಕೆ ಕೃಷಿ ಉತ್ಪನ್ನಗಳನ್ನು ಸಾಗಿಸಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿಯು ಕಡಿಮೆಯಾಗುವುದರೊಂದಿಗೆ ಕಡಿಮೆ ಖರ್ಚಿನಲ್ಲಿ ಮತ್ತು ಸುವ್ಯವಸ್ಥಿತವಾಗಿ ಉತ್ಪನ್ನಗಳು ಉಗ್ರಾಣ ಸೇರುತ್ತವೆ. ಅಲ್ಲದೇ ಇದರಿಂದ ಟ್ರ್ಯಾಕ್ಟರ್ ಹೊಂದಿರುವವರಿಗೆ ಕೆಲಸವೂ ಸಿಗಲಿದೆ ಎಂದು ಅವರು ತಿಳಿಸಿದರು.
ಎಪಿಎಂಸಿ ಜೊತೆಗೆ ಇನ್ನು ಮುಂದೆ ಕೃಷಿ ಶೀಥಲ ಕೇಂದ್ರಗಳಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ದಾಸ್ತಾನು ಮಾಡಲು ನಿರ್ಧರಿಸಲಾಗಿದ್ದು, ರೈತರು ತಮ್ಮ ಫಸಲನ್ನು ಕೃಷಿ ಶೀಥಲ ಕೇಂದ್ರಗಳಲ್ಲಿ ಸುಮಾರು 8 ತಿಂಗಳವರೆಗೆ ದಾಸ್ತಾನು ಮಾಡಿ, ಫಸಲಿಗೆ ಉತ್ತಮ ಬೆಲೆ ಬಂದಾಗ ಅದನ್ನು ಮಾರಾಟ ಮಾಡಬಹುದು ಎಂದು ಬಂಡೆಪ್ಪ ಖಾಶೆಂಪೂರ ವಿವರಿಸಿದರು.
ರೈತರಿಗೆ ವರ್ಷಪೂರ್ತಿ ನೆರವು ನೀಡುವ ನಿಟ್ಟಿನಲ್ಲಿ ರೈತ ಕಣಜ ಯೋಜನೆಯನ್ನು ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಇದಕ್ಕಾಗಿ ಸರ್ಕಾರ 500 ಕೋಟಿ ರೂ. ಆವರ್ತ ನಿಧಿ ಮೀಸಲಿಟ್ಟಿದ್ದು, ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ವಯ ಹೆಸರುಕಾಳು, ಉದ್ದಿನಬೇಳೆ, ಸೋಯಾ, ತೊಗರಿ ಸೇರಿದಂತೆ 12 ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುತ್ತಿದೆ. ಬೆಂಬಲ ಬೆಲೆ ನಿಗದಿಯಾಗಿ ಮುಂದಿನ ವರ್ಷದಿಂದ ಕೇಂದ್ರ ಸರ್ಕಾರಕ್ಕೆ ಕಾಯದೇ ರಾಜ್ಯ ಸರ್ಕಾರವೇ ಬೆಂಬಲ ಬೆಲೆ ನಿಗದಿಪಡಿಸಲಿದೆ ಎಂದರು.
ಸಹಕಾರ ಬ್ಯಾಂಕುಗಳ ಮೂಲಕ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸ್ವ ಉದ್ಯೋಗ ಕೈಗೊಳ್ಳಲು 10 ಲಕ್ಷ ರೂ.ವರೆಗೆ 'ಕಾಯಕ' ಯೋಜನೆಯಡಿ ಸಾಲ ಒದಗಿಸಲಾಗುತ್ತಿದ್ದು, ಇದರಲ್ಲಿ ಮೊದಲ 5 ಲಕ್ಷಗಳವರೆಗಿನ ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ 5 ರಿಂದ 10 ಲಕ್ಷವರೆಗೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿದ್ದು, ಇಲ್ಲಿಯವರೆಗೆ ಸುಮಾರು 212 ಸ್ವಸಹಾಯ ಗುಂಪುಗಳಿಗೆ 11.36 ಕೋ.ರೂ.ಗಳ ಸಾಲ ವಿತರಿಸಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು.
ಸಾಲಮನ್ನಾ ಕುರಿತು ಮಾತನಾಡಿದ ಬಂಡೆಪ್ಪ ಖಾಶೆಂಪೂರ, ಸಹಕಾರಿ ಬ್ಯಾಂಕುಗಳ ರೈತರ ಸಾಲ ಮನ್ನಾಕ್ಕಾಗಿ ಸುಮಾರು 22.36 ಲಕ್ಷ ರೈತರು ಖಾತೆಗಳನ್ನು ತೆರೆದಿದ್ದು, ಇಲ್ಲಿಯವರೆಗೆ 18.71 ಲಕ್ಷ ರೈತರು ಸಾಲ ಮನ್ನಾಕ್ಕಾಗಿ ಮಾಹಿತಿ ಒದಗಿಸಿದ್ದಾರೆ. ದೇಶದಲ್ಲಿ ರೈತರ ಸಾಲಮನ್ನಾ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಕರ್ನಾಟಕ ಸರ್ಕಾರ ಮೊದಲ ಬಾರಿಗೆ ಜಾರಿ ಮಾಡಿದ್ದು, ಇದಕ್ಕಾಗಿ ವಿಶೇಷ ಸಾಫ್ಟ್ ವೇರ್ ಅಭಿವೃದ‍್ಧಿಪಡಿಸಲಾಗಿದೆ. 2019 ರ ಜೂನ್ ವೇಳೆಗೆ ಸಹಕಾರ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ರಾಷ್ಟ್ರೀಕೃತಬ್ಯಾಂಕುಗಳಿಂದ ಸಲ್ಲಿಸಿರುವ 15.5 ಲಕ್ಷ ರೈತರ ಮಾಹಿತಿಯಲ್ಲಿ 5 ಲಕ್ಷ ರೈತರ ಮಾಹಿತಿ ಸರಿಯಿದ್ದು, ಮಾಹಿತಿ ಸರಿಯಿರುವ ರೈತರ ಖಾತೆಗೆ 1300 ಕೋಟಿ ರೂ. ಹಣವನ್ನು ಮುಂದಿನ 5 ದಿನಗಳಲ್ಲಿ ಜಮೆ ಮಾಡಲಾಗುವುದು ಎಂದರು.
ಜನವರಿ ಅಂತ್ಯದವರೆಗೆ 4.08 ಲಕ್ಷ ರೈತರ ಪೈಕಿ 3.87 ಲಕ್ಷ ಹೊಸ ರೈತರನ್ನು ಸಾಲಮನ್ನಾ ಅಡಿ ಗುರುತಿಸಲಾಗಿದ್ದು,  ಒಟ್ಟು 1796.76 ಕೋಟಿ ರೂ.ನಲ್ಲಿ 1088.90 ಕೋಟಿ ರೂ.ನಷ್ಟು ಸಾಲಮನ್ನಾ ಮಾಡಲಾಗಿದೆ. ಆರ್ಥಿಕ ಇಲಾಖೆಯಿಂದ ಇಲ್ಲಿಯವರೆಗೆ ಸಾಲಮನ್ನಾಕ್ಕಾಗಿ 2600 ಕೋಟಿ ರೂ. ಬಂದಿದ್ದು, ಇನ್ನೂ 1500 ಕೋ.ರೂ. ಹಣ ಇಲಾಖೆಯಿಂದ ಬರಬೇಕಿದೆ ಎಂದು ಸಚಿವ ಬಂಡೆಪ್ಪ ಖಾಶೆಂಪೂರ ತಿಳಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...