ABC

Tuesday, 29 January 2019

ಬಜೆಟ್ ಮಂಡನೆಗೂ ಕ್ಯಾತೆ ತೆಗೆದ ಸಿದ್ದು !! ದೋಸ್ತಿ ಪಕ್ಷಗಳ ಶಾಸಕರ ಟೀಕೆ ಟಿಪ್ಪಣಿ,


ದೋಸ್ತಿ ಪಕ್ಷಗಳ ಶಾಸಕರ ಟೀಕೆ ಟಿಪ್ಪಣಿ, ಆರೋಪ-ಪ್ರತ್ಯಾರೋಪ ಸಮ್ಮಿಶ್ರ ಸರ್ಕಾರದ ಬುಡವನ್ನು ಅಲುಗಾಡಿಸುತ್ತಿರುವ ಸಂದರ್ಭದಲ್ಲೇ ಬಜೆಟ್​ನ ಜನಪ್ರಿಯತೆಗಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಹಣಾಹಣಿ ಆರಂಭವಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ 2019-20ರ ಆಯವ್ಯಯ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ಸರ್ಕಾರದ ಅವಧಿಯ ಕೊನೆಯ ಬಜೆಟ್​ನ ಅನೇಕ ಪ್ರಮುಖ ಘೋಷಣೆ ಜಾರಿಗೆ ಬಂದಿಲ್ಲವೆಂದು ಕೈಪಡೆ ಆಕ್ಷೇಪವೆತ್ತಿದೆ. ಈ ಸಾಲಿನ ಬಜೆಟ್​ಗೆ ಮುನ್ನವೇ ಆ ಘೋಷಣೆಗಳ ಆದೇಶ ಹೊರಡಿಸುವುದಕ್ಕಾಗಿ ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. 2013ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಬಜೆಟ್​ನಲ್ಲೂ ಘೋಷಿಸಲಾಗಿತ್ತು.
ಸಿದ್ದರಾಮಯ್ಯ ಘೋಷಿಸಿದ್ದ ಕಾಂಗ್ರೆಸ್​ಗೆ ಹೆಸರು ತರುವಂತಹ ಈ ಯೋಜನೆಗಳನ್ನೂ ತಮ್ಮ ಬಜೆಟ್​ನಲ್ಲಿ ಸೇರಿಸಿಕೊಂಡು ಜಾರಿಗೆ ತರಲಾಗುವುದೆಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು. ಆದರೆ ಈಗ ಹಿಂದಿನ ಸರ್ಕಾರದ ಯೋಜನೆ ನಿರ್ಲಕ್ಷಿಸಿದ್ದಾರೆಂಬುದು ಕಾಂಗ್ರೆಸ್​ನ ಆರೋಪ. ಬಜೆಟ್ ಬಳಿಕ ಈ ವಿಚಾರ ಎರಡೂ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಆಂತರಿಕ ಸಂಘರ್ಷಕ್ಕೂ ಕಾರಣವಾಗಬಹುದೆಂದು ಹೇಳಲಾಗುತ್ತಿದೆ.ಸಚಿವರ ಸಭೆಯಲ್ಲೂ ಚರ್ಚೆ
ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್ ಮಂತ್ರಿಗಳ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಿ ಪಕ್ಷದ ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಸಮಾಜ ಕಲ್ಯಾಣ, ಜಲ ಸಂಪನ್ಮೂಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ನಗರಾಭಿವೃದ್ಧಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಆಹಾರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಗೆ ಅವರವರ ಇಲಾಖೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಬಜೆಟ್ ಘೋಷಣೆಗಳನ್ನು ಕೂಡಲೇ ಸರ್ಕಾರಿ ಆದೇಶ ಮಾಡಿಸುವಂತೆ ಮುಖಂಡರು ಸೂಚನೆ ನೀಡಿದ್ದರು. ಇವೆಲ್ಲವೂ ಆದೇಶಗಳಾದರೆ ಸರ್ಕಾರದ ಮೇಲೆ ಪಕ್ಷದ ಹಿಡಿತ ಇರುತ್ತದೆ. ಒಳ್ಳೆಯ ಕೆಲಸ ಮಾಡಿದ ಹೆಸರು ಪಕ್ಷಕ್ಕೆ ಬರುತ್ತದೆ. ಬಜೆಟ್​ಪೂರ್ವ ಚರ್ಚೆಯ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕು. ತಕ್ಷಣ ಆದೇಶಗಳನ್ನು ಮಾಡಿಸಬೇಕು. ಜೆಡಿಎಸ್ ಹಿಡಿತದಲ್ಲಿರುವ ಇಲಾಖೆಗಳಲ್ಲೂ ಪ್ರಮುಖ ಘೋಷಣೆಗಳ ಜಾರಿಗೆ ಸಂಪುಟದಲ್ಲಿ ಚರ್ಚೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿತ್ತು.

ಹಣಕಾಸಿನ ಕೊರತೆ ಇರುವ ಕಾರಣ ಹೊಸ ಯೋಜನೆಗಳನ್ನು ಜಾರಿಗೆ ತರಲಾಗದ ಸ್ಥಿತಿ ಇದೆ. ಅನುದಾನ ಬಿಡುಗಡೆಯಾಗುತ್ತಿಲ್ಲ. ಸಾಲಮನ್ನಾಕ್ಕೆ ದೊಡ್ಡ ಮೊತ್ತದ ಹಣಕಾಸು ಹೊಂದಾಣಿಕೆ ಮಾಡಬೇಕಾಗಿದೆ ಎಂಬ ನೆಪ ಹೇಳಲಾಗುತ್ತಿದೆ ಎಂದು ಅನೇಕ ಸಚಿವರು ಪರಿಸ್ಥಿತಿ ವಿವರಿಸಿದ್ದಾರೆ. ಮುಖ್ಯಮಂತ್ರಿ ಜತೆಗೆ ಚರ್ಚೆ ಮಾಡಬೇಕು ಎಂದು ಹೇಳಿರುವುದು ಮಂತ್ರಿಗಳು ಸಂದಿಗ್ಧಕ್ಕೆ ಸಿಲುಕುವಂತೆ ಮಾಡಿದೆ. ವಿಶೇಷ ಅನುದಾನ ಬಿಡುಗಡೆಯಾಗುತ್ತಿಲ್ಲವೆಂಬುದು ಶಾಸಕರ ಮುನಿಸಿಗೂ ಕಾರಣವಾಗಿದೆ.
ಜೆಡಿಎಸ್ ಮುಖಂಡರು ಮಾತ್ರ ಈ ವಿಚಾರದಲ್ಲಿ ಕಾಂಗ್ರೆಸ್ ಸಚಿವರ ಕಡೆಯೇ ಬೊಟ್ಟು ಮಾಡುತ್ತಾರೆ. ಕಾಂಗ್ರೆಸ್ ಮಂತ್ರಿಗಳು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಅನಗತ್ಯ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದೆಂದು ಹೇಳುತ್ತಾರೆ.
ಕೈಪಡೆಗೆ ಕುತೂಹಲ ಕುಮಾರಸ್ವಾಮಿ ತಮ್ಮ ಬಜೆಟ್​ನಲ್ಲಿ ಕಾಂಗ್ರೆಸ್​ನ ಘೋಷಣೆಗಳಲ್ಲಿ ಕೆಲವಕ್ಕಾದರೂ ಅನುದಾನ ಒದಗಿಸುವರೇ ಎಂಬ ಕುತೂಹಲ ಕೈ ಪಕ್ಷಕ್ಕೂ ಇದೆ.
ಕೈಪಡೆಯ ಪ್ರಮುಖ ಘೋಷಣೆ

ಗ್ರಾಪಂ ಮಟ್ಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ, ಖುಷ್ಕಿ ರೈತರಿಗೆ ಹೆಕ್ಟೇರ್​ಗೆ 5000 ರೂ. ನೀಡುವ 3500 ಕೋಟಿ ರೂ ವೆಚ್ಚದ ರೈತ ಬೆಳಕು, ನೆಲಗಡಲೆಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್, ಮೇವು ಭದ್ರತಾ ನೀತಿ, ವಿವಿಧ ಏತ ನೀರಾವರಿ ಯೋಜನೆಗಳು,ತುಂಗಭದ್ರ ಸಮತೋಲನ ಅಣೆಕಟ್ಟು, 176 ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಶಾಲೆಗಳಲ್ಲಿ ಸಿಸಿ ಕ್ಯಾಮರಾ, 100 ಪಾರಂಪರಿಕ ಶಾಲೆ, ಇನ್ನೂ ಪೂರ್ಣ ಜಾರಿಗೆ ಬಾರದ ಆರೋಗ್ಯ ಕರ್ನಾಟಕ, ರಚನೆಯಾಗದ ಆರೋಗ್ಯ ಪರಿಷತ್ತು, ಮಕ್ಕಳ ಹಕ್ಕುಗಳ ನಿರ್ದೇಶನಾಲಯ, ವೃತ್ತಿ ರಂಗಭೂಮಿ ಕೇಂದ್ರ, ಕ್ರೀಡಾ ವಿವಿ, ಲಾಜಿಸ್ಟಿಕ್ ಪಾರ್ಕ್, ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿ, 19 ಲಕ್ಷ ವಿದ್ಯಾರ್ಥಿಗಳಿಗೆ ಬಸ್​ಪಾಸ್, ಪೊಲೀಸ್ ನೇಮಕಾತಿ ಮಂಡಳಿ, ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಶೌಚಗೃಹ ಸೇರಿ ವಿವಿಧ ಸೌಲಭ್ಯ, ಕಲಬುರಗಿ ಕಲಾವನ, ದೆಹಲಿ ಹಾಟ್ ಮಾದರಿಯಲ್ಲಿ ಮೈಸೂರು ಹಾಟ್ ಹೀಗೆ ವಿವಿಧ ಯೋಜನೆಗಳಿವೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...