ಜ.30-ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಇಂದು ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಮಹಾ ಅಧಿವೇಶನ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಸಮ್ಮೇಳನಕ್ಕೆ ನಾಡಿನ ನಾನಾ ಭಾಗಗಳಿಂದ ಜನ ತಂಡೋಪ ತಂಡವಾಗಿ ಆಗಮಿಸಿದ್ದರು.
ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್. ವಿಶ್ವನಾಥ್, ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ಸಂಸದ ಎಲ್.ಆರ್.ಶಿವರಾಮೇಗೌಡ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ, ವಿಧಾನಪರಿಷತ್ ಸದಸ್ಯರಾದ ಫಾರೂಕ್, ಟಿ.ಎ.ಶರವಣ ಸೇರಿದಂತೆ ಸುಮಾರು 20 ರಾಜ್ಯಗಳ ರಾಜ್ಯಾಧ್ಯಕ್ಷರು, ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಜೆಡಿಎಸ್ ಅರಮನೆ ಮೈದಾನ ದಲ್ಲಿ ಈಗಾಗಲೇ ಅಲ್ಪಸಂಖ್ಯಾತರ ಸಮಾವೇಶ ಹಮ್ಮಿಕೊಂಡಿತ್ತು. ಇತರೆ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುವ ಕುರಿತು ಚರ್ಚಿಸಲಾಯಿತು.
ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿದ ವೈ.ಎಸ್.ವಿ.ದತ್ತ, ಪಿ.ಜಿ.ಆರ್.ಸಿಂಧ್ಯಾ, ಎಚ್.ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದರು. ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ, ಬೆಲೆ ಏರಿಕೆ ಸೇರಿದಂತೆ ಜನ ವಿವಿಧ ಸಮಸ್ಯೆ ಎದುರಿಸುತ್ತಿದ್ದರೂ ಏನೂ ಕ್ರಮ ಕೈಗೊಂಡಿಲ್ಲ.
ನೋಟು ಅಮಾನೀಕರಣದಿಂದ ಬಡ ವ್ಯಾಪಾರಿಗಳು ಕಂಗೆಟ್ಟು ಹೋಗಿದ್ದಾರೆ. ಪದೇ ಪದೇ ತೈಲ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ ಎಂದು ಗುಡುಗಿದರು. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದನ್ನೆಲ್ಲ ಪ್ರಧಾನಿ ನರೇಂದ್ರ ಮೋದಿ ಗಮನಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಚೆನ್ನಾಗಿ ಆಡಳಿತ ನಡೆಸುತ್ತಿದ್ದರೂ, ಬಿಜೆಪಿಯವರು ಪದೇ ಪದೇ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ಕಾರ್ಯಕರ್ತರು ಶ್ರಮ ವಹಿಸಿ ಪಕ್ಷಕ್ಕೆ ಗೆಲುವು ತಂದುಕೊಡಬೇಕು. ಈಗಿನಿಂದಲೇ ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿ ಬಲಿಷ್ಠಗೊಳಿಸಬೇಕೆಂದು ನಾಯಕರು, ಕಾರ್ಯಕರ್ತರನ್ನು ಹುರಿದುಂಬಿಸಿದರು. ಅಧಿವೇಶನ ಪ್ರಾರಂಭಕ್ಕೂ ಮುನ್ನ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಎರಡುನಿರ್ಣಯಗಳನ್ನು ಕೈಗೊಳ್ಳಲಾಯಿತು. ಒಂದು ರಾಜಕೀಯ ನಿರ್ಣಯ, ಮತ್ತೊಂದು ಆರ್ಥಿಕ ನಿರ್ಣಯ.
ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ರಾಜಕೀಯ ನಿರ್ಣಯ ಮಂಡಿಸಿ ಜಾತ್ಯತೀತ ನಿಲುವಿನ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಒಂದಾಗಿ ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿಯನ್ನು ಮಣಿಸಬೇಕಾಗಿದೆ.
ಅದಕ್ಕಾಗಿ ಪ್ರಬಲ ಒಕ್ಕೂಟ ಸ್ಥಾಪನೆಯಾಗ ಬೇಕು. ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಆರ್ಥಿಕ ನಿರ್ಣಯವನ್ನು ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮಂಡಿಸಿ, ಕೇಂದ್ರ ಸರ್ಕಾರ ಕೈಗೊಂಡ ಆರ್ಥಿಕ ನಿಲುವುಗಳು, ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಿದೆ ಎಂದು ಹೇಳಿದರು. ನೋಟು ಅಮಾನೀಕರಣ, ಜಿಎಸ್‍ಟಿಯಿಂದಾಗಿ ಕೃಷಿ ಸಮಸ್ಯೆಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೊಂದರೆ ಎದುರಾಗಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಎಸ್‍ಟಿಯನ್ನು ಮತ್ತಷ್ಟು ಪಾರದರ್ಶಕ ಗೊಳಿಸಿ ತೆರಿಗೆ ಹಂಚಿಕೆ ವಿಳಂಬವಾಗುವುದನ್ನು ತಪ್ಪಿಸಬೇಕಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ವಸ್ತು ನಿಷ್ಠ ಕಾರ್ಯಕ್ರಮ ರೂಪಿಸಬೇಕು. ಗ್ರಾಮೀಣ ಭಾಗದ ಜನರ ಸಮಸ್ಯೆಗಳ ನಿವಾರಣೆಗೆ ಪರಿಣಾಮಕಾರಿ ಯೋಜನೆ ಜಾರಿಗೆ ತರುವುದು ಸೇರಿದಂತೆ ಹಲವು ವಿಷಯಗಳನ್ನು ಆರ್ಥಿಕ ನಿರ್ಣಯದಲ್ಲಿ ಅವರು ಪ್ರಸ್ತಾಪಿಸಿದರು.
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today


No comments:
Post a Comment