ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಘೋಷಣೆಯಾಗಿರುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ ಬಗ್ಗೆ ಮಾಧ್ಯಮಗಳು ದಿನವಿಡೀ ಬೊಬ್ಬೆ ಹೊಡೆದಿವೆ. ‘ಮೋದಿಯ ಮಾಸ್ಟರ್ ಸ್ಟ್ರೋಕ್’ ಎಂದು ಪುಂಖಾನುಪುಂಖವಾಗಿ ಕತೆ ಕಟ್ಟುತ್ತಿವೆ. 2 ಹೆಕ್ಟೇರ್ (ಸರಿಸುಮಾರು ಐದು ಎಕರೆ) ವರೆಗಿನ ಕೃಷಿ ಭೂಮಿ ಒಡೆತನ ಹೊಂದಿರುವ ರೈತರಿಗೆ ವಾರ್ಷಿಕ 6 ಸಾವಿರ ರೂ (ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ. ನಂತೆ) ಪ್ರೋತ್ಸಾಹ ಧನ ನೀಡುವ ಯೋಜನೆಯು ರೈತ ಸಮುದಾಯವನ್ನು ಏಕಾಏಕಿ ಕೇಂದ್ರ ಸರ್ಕಾರದ ಪರವಾಗಿಸಿ ಬಿಡುತ್ತದೆ ಎನ್ನುವಂತೆ ಬಿಂಬಿಸುತ್ತಿವೆ. ಇದು ‘ಸುಳ್ಳನ್ನು ಪ್ರಭುತ್ವಕ್ಕೆ ಹೇಳುತ್ತವೆ ಹೊರತು' ಮತ್ತೇನೂ ಅಲ್ಲ.
ಕಳೆದೆರಡು ವರ್ಷಗಳಲ್ಲಿ ದೇಶದಲ್ಲಿ ಕರ್ನಾಟಕವೂ ಸೇರಿದಂತೆ 8 ರಾಜ್ಯಗಳಲ್ಲಿ ಕೃಷಿ ಸಾಲ ಮನ್ನಾ ಮಾಡಲಾಗಿದೆ. ಹೀಗೆ ಮನ್ನಾ ಆಗಿರುವ ಸಾಲದ ಮೊತ್ತ ಸರಿ ಸುಮಾರು ರೂ.1.9 ಟ್ರಿಲಿಯನ್ ಎನ್ನಲಾಗುತ್ತಿದೆ. 2004ರಲ್ಲಿ ಆಂಧ್ರ ಹಾಗೂ ತೆಲಂಗಾಣಗಳು ಹಾಗೂ 2016ರಲ್ಲಿ ತಮಿಳುನಾಡು ಸಾಲಮನ್ನಾ ಘೋಷಿಸಿದ್ದವು. ಈ ಲೆಕ್ಕ ಹಿಡಿದರೆ ಕಳೆದ ಐದು ವರ್ಷಗಳಲ್ಲಿ ಕನಿಷ್ಠ 11 ರಾಜ್ಯಗಳಲ್ಲಿ ಕೃಷಿ ಸಾಲಮನ್ನಾದ ಹೆಜ್ಜೆಗಳು ಕಾಣುತ್ತವೆ. ಇನ್ನು ಇದೀಗ ಕೇಂದ್ರ ಬಜೆಟ್ ನ ಬೆನ್ನಿಗೇ ಆಯಾ ರಾಜ್ಯಗಳಲ್ಲಿ ಮಂಡನೆಯಾಗಲಿರುವ ಬಜೆಟ್ ಗಳಲ್ಲಿ ರೈತರನ್ನು ಓಲೈಸಲು ಸ್ಥಳೀಯ ಸರ್ಕಾರಗಳು ಏನು ಕ್ರಮಕ್ಕೆ ಮುಂದಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ. ಇದಾಗಲೇ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಒಂದೊಮ್ಮೆ ತಾನು ಅಧಿಕಾರಕ್ಕೆ ಬಂದರೆ ಕೃಷಿ ಸಾಲಮನ್ನಾ ಮಾಡುವುದಾಗಿ ರೈತಾಪಿ ವರ್ಗಕ್ಕೆ ಆಶ್ವಾಸನೆಯನ್ನು ನೀಡಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.
ಕೃಷಿ ಸಾಲ ಮನ್ನಾದ ಕ್ರಮಕ್ಕೆ ಮುಂದಾದ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಪಂಜಾಬ್, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡುಗಳು ಪ್ರಮುಖವಾಗಿ ಕಾಣುತ್ತವೆ. ತೆಲಂಗಾಣ ಮತ್ತು ಒಡಿಶಾಗಳು ರೈತ ಸಮುದಾಯಕ್ಕೆ ನೇರ ನಗದು ಹಣದ ಪಾವತಿ ಮೂಲಕ ಕೃಷಿ ಸಬಲೀಕರಣದ ಹೊಸ ಉಪಕ್ರಮಗಳಿಗೆ ಮುಂದಾಗಿವೆ. ಇದನ್ನೇ ಕೇಂದ್ರ ಸರ್ಕಾರವು ಅನುಕರಿಸಿದೆ. ಹಾಗೆ ನೋಡಿದರೆ ಒಡಿಶಾದಲ್ಲಿ ವಾರ್ಷಿಕ 12,500 ರೂ. ಗಳನ್ನು ಭೂಮಿ ರಹಿತ ಕೃಷಿಕ ಕುಟುಂಬಗಳಿಗೆ ‘ಕಾಲಿಯಾ’ (ಕೃಷುಕ್ ಅಸಿಸ್ಟೆನ್ಸ್ ಫಾರ್ ಲೈವ್ಲಿಹುಡ್ ಅಂಡ್ ಇನ್ಕಂ ಅಗಮೆಂಟೇಷನ್) ಯೋಜನೆಯಡಿ ನೀಡಲಾಗುತ್ತಿದೆ. ತೆಲಂಗಾಣದಲ್ಲಿ ಇದೇ ಮಾದರಿಯ ಯೋಜನೆ ‘ರೈತ ಬಂಧು’ ಹೆಸರಿನಲ್ಲಿದೆ.
ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿವಿಧ ಪಕ್ಷಗಳು ರೈತರ ಪರವಾಗಿ ಇಷ್ಟೆಲ್ಲ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವಾಗ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆಯ ಹೊಸ್ತಿಲಿನಲ್ಲಿ 2 ಹೆಕ್ಟೇರ್ ಗೆ 6 ಸಾವಿರ ರೂ. ನೀಡುವ ಮಾತನಾಡಿದ ತಕ್ಷಣ ದೇಶದ ರೈತರೆಲ್ಲ ಮೋದಿಯವರ ಪರವಾಗಿ ವಾಲಿ ಬಿಡುತ್ತಾರೆ ಎಂದು ಮಾಧ್ಯಮಗಳು ಹೇಳುವ ಮಾತಿಗೆ ಆಧಾರವೇನು? ಚುನಾವಣೆಗೂ ಮುನ್ನ ಸುಮಾರು 12 ಕೋಟಿ ರೈತರ ಖಾತೆಗಳಿಗೆ ಸೇರಲಿರುವ ರೂ. 2 ಸಾವಿರ ಹಣ ಅವರು ತಮ್ಮ ಬೇಡಿಕೆಗಳನ್ನು ಮರೆಯುವಂತೆ ಮಾಡುತ್ತದೆ ಎಂದು ತಿಳಿಯುವುದು ಮೂರ್ಖತನ. ಅದೇ ರೀತಿ, ಮೇಲೆ ಹೇಳಿದ ಬಿಜೆಪಿಯೇತರ ರಾಜ್ಯಗಳಲ್ಲಿ ಚುನಾವಣೆ ವೇಳೆ ರೂ.2 ಸಾವಿರ ಸಿಕ್ಕಿತೆನ್ನುವ ಕಾರಣಕ್ಕೆ ತಮ್ಮ ಹಿತ ಕಾಯ್ದ ಪಕ್ಷಗಳನ್ನು ಈ ರೈತರು ಮರೆತು ಬಿಡಲಿದ್ದಾರೆ ಎಂದು ಕಲ್ಪಿಸಿಕೊಳ್ಳುವುದು ಅತಿಶಯವೇ! ಹಾಗಿದ್ದೂ, ಇಡೀ ಕೃಷಿ ವಲಯವೇ ಮೋದಿ ಮಂತ್ರವನ್ನು ಜಪಿಸತೊಡಗಿದೆ ಎಂದು ಬಿಂಬಿಸಲು ಮುಂದಾಗಿರುವ ಬಹುತೇಕ ಮಾಧ್ಯಮಗಳು ಆಳುವ ಸರ್ಕಾರಕ್ಕೆ ಬೇಕಿರುವ ಆಕರ್ಷಕ ಸುಳ್ಳನ್ನು ಮಾತ್ರವೇ ಹೇಳುತ್ತಿವೆಯೇ ಹೊರತು ಬೇರೇನೂ ಅಲ್ಲ. ಸುಳ್ಳು ಹೇಳುವುದರಲ್ಲಿರುವ ‘ಲಾಭ’ ಸತ್ಯ ಹೇಳುವುದರಲ್ಲಿ ಇರುವುದಿಲ್ಲವಲ್ಲ! ಒಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಭಿಕ್ಷೆಗೆ ರೈತರು ಮಾರು ಹೋಗುವುದಿಲ್ಲ.
No comments:
Post a Comment