ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾ ತೆರೆಗೆ ಬರುತ್ತೆ ಅಂದರೆ ಸಾಕು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿರುತ್ತದೆ. ಅದು ನಟಸಾರ್ವಭೌಮನ ವಿಷಯದಲ್ಲಿಯೂ ಹಾಗೇ ಇದೆ. ನಟಸಾರ್ವಭೌಮ ಇದೇ ತಿಂಗಳು 7ರಂದು ತೆರೆಗಪ್ಪಳಿಸಲಿದ್ದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.ಕಳೆದ ಒಂದು ವಾರದಿಂದಲೇ ನಟಸಾರ್ವಭೌಮನ ಸ್ವಾಗತಕ್ಕೆ ಚಿತ್ರಮಂದಿರಗಳು ಸಿದ್ದಗೊಂಡಿವೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ನಟಸಾರ್ವಭೌಮ ಚಿತ್ರದ ಮೊದಲ ಪ್ರದರ್ಶನ ಆರಂಭವಾಗಲಿದ್ದು ಈಗಾಗಲೇ ಮಧ್ಯರಾತ್ರಿ ಹನ್ನೆರಡು ಗಂಟೆಯ ಪ್ರದರ್ಶನದ ಟಿಕೆಟ್ ಗಳು ಸಹ ಸೋಲ್ಡ್ ಆಗಿವೆ.
ಬೆಂಗೂರಿನ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ನಟಸಾರ್ವಭೌಮ ಚಿತ್ರದ ಮೊದಲ ಪ್ರದರ್ಶನ ಆರಂಭವಾಗಲಿದ್ದು ಮಧ್ಯರಾತ್ರಿ 12ಕ್ಕೆ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಹಬ್ಬ ಆರಂಭವಾಗಲಿದೆ.ಮಾಗಡಿ ರಸ್ತೆಯ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಾದ ಮನು , ಪುನಿ ,ಆಂಜಿ , ಹರೀಶ್ ಮತ್ತು ಸೂರಿ ಎಂಬುವವರು ನಟಸಾರ್ವಭೌಮ ಚಿತ್ರದ ಮಧ್ಯರಾತ್ರಿ ಪ್ರದರ್ಶನದ ಎಲ್ಲಾ ಟಿಕೆಟ್ ಖರೀದಿಸುವ ಮೂಲಕ ರಾಜ್ಯದಲ್ಲಿ ಮೊದಲ ಪ್ರದರ್ಶನ ಆರಂಭಿಸುತ್ತಿದ್ದಾರೆ.ಊರ್ವಶಿ ಮತ್ತು ಶ್ರೀನಿವಾಸ ಚಿತ್ರಮಂದಿರಗಳಲ್ಲಿ ಸಹ ಹನ್ನೆರಡು ಗಂಟೆಗೆ ನಟಸಾರ್ವಭೌಮನ ಹಬ್ಬ ಶುರು….
ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ , ಲಾಲ್ ಬಾಗ್ ನ ಊರ್ವಶಿ ಮತ್ತು ಗೌಡನ ಪಾಳ್ಯ ಶ್ರೀನಿವಾಸ ಚಿತ್ರಮಂದಿರಗಳಲ್ಲಿ ಮತ್ತು ದಾವಣಗೆರೆ ಶಿವಮೊಗ್ಗ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಟಸಾರ್ವಭೌಮ ಚಿತ್ರದ ಮೊದಲ ಪ್ರದರ್ಶನ ಆರಂಭವಾಗಲಿದೆ. ಇನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಟ ಸಾರ್ವಭೌಮ ಆರಂಭವಾಗಿ ಮುಂಜಾನೆ 4 , ಬೆಳಿಗ್ಗೆ 7 ಬೆಳಿಗ್ಗೆ 10 ಮಧ್ಯಾಹ್ನ 1-00 ಸಂಜೆ 4 ಮುಸ್ಸಂಜೆ 7 ಮತ್ತು ರಾತ್ರಿ 10 ಒಟ್ಟು ದಿನವಿಡೀ ನಟಸಾರ್ವಭೌಮ ಪ್ರದರ್ಶನ ಗೊಳ್ಳುವ ಮೂಲಕ ದಾಖಲೆ ಬರೆಯುತ್ತಿದೆ.
ಅಪ್ಪು ಅಭಿಮಾನಿಗಳು ಉತ್ಸಾಹದಿಂದ ಚಿತ್ರಮಂದಿರಗಳನ್ನ ಅಲಂಕರಿಸುತ್ತಿದ್ದಾರೆ. ಕಟೌಟ್‍ಗಳು, ಬ್ಯಾನರ್ಗಳು ಥಿಯೇಟರ್ಗಳ ಮುಂದೆ ರಾರಾಜಿಸುತ್ತಿವೆ. ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ನಿನ್ನೆ ಪುನೀತ್ ಅಭಿಮಾನಿಗಳು, ಡಾ.ರಾಜ್ ಹಾಗೂ ಅಪ್ಪು ಬ್ಯಾನರ್ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.ಹಾಗೆ ಕಳೆದ ಶುಕ್ರವಾರದಿಂದಲೇ ನಟಸಾರ್ವಭೌಮ ಚಿತ್ರದ ಮುಂಗಡ ಬುಕ್ಕಿಂಗ್ ಓಪನ್ ಆಗಿದ್ದು. ಪ್ರಸನ್ನ, ಊರ್ವಶಿ, ಸೇರಿದಂತೆ ಕೆಲವು ಚಿತ್ರಮಂದಿರಗಳ ಮುಂಜಾನೆ ಪ್ರದರ್ಶನದ ಟಿಕೆಟ್ಗಳು ಸಂಪೂರ್ಣವಾಗಿ ಮಾರಾಟವಾಗಿ ಹೋಗಿವೆ.
No comments:
Post a Comment