ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಕಳೆದ ದಿನಗಳಿಂದ ಭಾರೀ ಸುದ್ದಿಯಲ್ಲಿತ್ತು. ದಕ್ಷಿಣ ವಲಯದ ಡಿಸಿಪಿ ಅಣ್ಣಾಮಲೈ ಮೂವರನ್ನ ಬಿಟ್ಟು ಎಲ್ಲರನ್ನ ಎತ್ತಂಗಡಿ ಮಾಡಿದ್ದರು. ಈಗ ಹೊಸ ಸಿಬ್ಬಂದಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಇದ್ದ ಮೂವರು ಪಿಎಸ್ಐಗಳನ್ನು ಬಿಟ್ಟು ಪೊಲೀಸ್ ಇನ್ಸ್ ಪೆಕ್ಟರ್ ಸೇರಿ 71 ಸಿಬ್ಬಂದಿಯನ್ನ ಎತ್ತಂಗಡಿ ಮಾಡಿದ್ದರು.
ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶನಿವಾರ ಇನ್ಸ್ ಪೆಕ್ಟರ್ ಅಜ್ರೇಶ್ ಸೇರಿ ಹೊಸ ಸಿಬ್ಬಂದಿ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದಾರೆ. ಇಲ್ಲಿವರೆಗೂ ಸುಮಾರು 20 ಮಂದಿ ಹೊಸದಾಗಿ ನಿಯೋಜನೆ ಆಗಿದ್ದಾರೆ. ಇನ್ನು ಮೂವತ್ತರಿಂದ ನಲ್ವತ್ತು ಸಿಬ್ಬಂದಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಾಗಿದೆ.
ವಿವಾದದ ಕೇಂದ್ರ ಬಿಂದುವಾಗಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಹೊಸ ವಾತಾವರಣ ಕಳೆಕಟ್ಟಿದೆ. ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದ ಮಹಿಳೆ ಜೊತೆ ಎಎಸ್‍ಐ ಹೀನಾಯವಾಗಿ ನಡೆದುಕೊಂಡಿದ್ದರು. ಈ ಘಟನೆ ಸಿಲಿಕಾನ್ ಸಿಟಿ ಪೊಲೀಸರಿಗೆ ಮುಜುಗರ ಉಂಟು ಮಾಡಿತ್ತು. ಬಳಿಕ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಎಎಸ್‍ಐ ರೇಣುಕಯ್ಯರನ್ನ ಅಮಾನತು ಮಾಡಿದ್ದರು.
ಠಾಣೆಯಲ್ಲಿ ಬಣ ರಾಜಕೀಯ ಮಾಡಿಕೊಂಡು ನ್ಯೂಸ್‍ಸೆನ್ಸ್ ಕ್ರಿಯೆಟ್ ಮಾಡಿ ಸುದ್ದಿಯಾಗುತ್ತಿದ್ದ ಸಿಬ್ಬಂದಿಯನ್ನ ಎತ್ತಂಗಡಿ ಮಾಡಿದ ಅಣ್ಣಾಮಲೈ ನಿಜವಾಗಿಯೂ ಸಿಂಗಂ ಆಗಿದ್ದಾರೆ ಎಂದು ಸಾರ್ವಜನಿಕರು ಈಗ ಮಾತನಾಡಿಕೊಳ್ಳುತ್ತಿದ್ದಾರೆ.
No comments:
Post a Comment